ಕನ್ನಡ ಸಾಹಿತ್ಯದಲ್ಲಿ ಅರಳುತ್ತಿರುವ ಯುವ ಪ್ರತಿಭೆ ಕುಮಾರಿ ಅಶ್ವಿನಿ

ಉದಯೋನ್ಮುಖ ಲೇಖಕರ/ಕವಿಗಳ ಪರಿಚಯ

ಕನ್ನಡ ಸಾಹಿತ್ಯದಲ್ಲಿ ಅರಳುತ್ತಿರುವ ಯುವ ಪ್ರತಿಭೆ

 

ಕಾವ್ಯದ ಅಸ್ಮಿತೆಯನ್ನು ಎದೆಯಿಂದ ಪ್ರೀತಿಸಲು ವಯಸ್ಸಿನ ಅಂತರವಿಲ್ಲಾ. ಕವಿತೆ ಅಂತ;ಕರಣದಲಿ ಮಿಡಿಯುವ ಮಿಡಿತವಾಗಬೇಕು. ಕಾವ್ಯವನ್ನು ಪ್ರೀತಿಸಬೇಕು, ಆರಾಧಿಸಬೇಕು, ಆಗ ಮಾತ್ರ ಕವಿತೆ ಒಲಿಯಬಲ್ಲದು.

ಸಾಹಿತ್ಯದ ಓದಿನ ಪ್ರೀತಿಯನ್ನು ಬಯಸದೇ ನಮ್ಮ ಕಲ್ಪನೆಯ ಲೋಕದಲ್ಲಿ ಕಾವ್ಯವನ್ನು ಕಟ್ಟಬಹುದು ಅದರೆ ಅದು ಬರೀ ಕಲ್ಪನೆಯ ಕಾವ್ಯವಾಗಿ ಉಳಿಯುತ್ತದೆ. ಕವಿ ಕವಯಿತ್ರಿ ಎನಿಸಿಕೊಳ್ಳಲು ಹಲವಾರು ಹಿರಿಯ ಕಿರಿಯರ ಬರಹಗಾರರ ಸಾಹಿತ್ಯವನ್ನು ಓದಿ ಗ್ರಹಿಸಿ ಮನನ ಮಾಡಿಕೊಂಡು ಕಾವ್ಯ ರಚನೆಯಲ್ಲಿ ತೊಡಗಿದರೆ ಮಾತ್ರ ಗಟ್ಟಿಯಾದ ಕಾವ್ಯವನ್ನು ಕಟ್ಟಬಹುದು.

 

ಕವಿಯಾದವನು ಈ ಸಮಾಜವನ್ನು ಪ್ರೀತಿಸಬೇಕು, ಎದೆಯೊಳಗೆ ಅಡಗಿರುವ ನೋವನ್ನು ಪದಗಳ ಸಾಲುಗಳಾಗಿ ಕಟ್ಟಬೇಕು, ಬರಹವು ಸಮಾಜದೊಳಗೆ ಜಾಗೃತಿಯನ್ನುಂಟು ಮಾಡಿ ಒಂದಷ್ಟು ಮನಸ್ಸುಗಳ ಬದಲಾವಣೆಗೆ ಕಾರಣವಾಗಬೇಕು.

 

ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಬರಹಗಾರರು                         ಬರಹಗಾತಿ೯ಯರು ಹೆಚ್ಚಾಗುತ್ತಿದ್ದಾರೆ ಮಾಯಲೋಕವೆಂಬ ಈ ಮೊಬೈಲ್ ಕೈಗೆ ಬಂದ ನಂತರ ಬಹಳಷ್ಟು ವಿಶಿಷ್ಟವಾದ ಪ್ರತಿಭೆಗಳು ಹೊರ ಜಗತ್ತಿಗೆ ಕಾಣಿಸಿಕೊಂಡವು ಮುಖಪುಟವನ್ನೆ ವೇದಿಕೆಯಾಗಿ ಬಳಸಿಕೊಂಡು ಜಗತ್ತಿನ ಜನ ಗುರುತಿಸುವಂತೆ ಮಾಡಿಕೊಂಡು ಸ್ನೇಹಿತರ ಗುರುಗಳ ಹಿರಿಯರ ಪ್ರೋತ್ಸಾಹದಿಂದ ಸಾಹಿತ್ಯದಲ್ಲಿ  ಬೆಳೆಯ ತೊಡಗಿದರು.

 

ಕನ್ನಡ ಸಾಹಿತ್ಯ ಓದುತ್ತಾ ಪ್ರೀತಿಸುತ್ತಾ ತಾನು ಯಾಕೇ ಕವಿತೆ ಕಾವ್ಯವನ್ನು ಬರೆಯಬಾರದು ಅಂತ ಯೋಚಿಸಿ ಪ್ರಯತ್ನಿಸಿ ಸಣ್ಣ ವಯಸ್ಸಿನಲ್ಲಿ ಸಾಹಿತ್ಯದ ಆಭಿರುಚಿಯನ್ನು ಬೆಳೆಸಿಕೊಂಡು ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡ ಹೊಸ ಪ್ರತಿಭೆಯೆ ಕುಮಾರಿ ಅಶ್ವಿನಿ ಚಂದ್ರಪ್ಪ.

 

ಕುಮಾರಿ ಅಶ್ವಿನಿ.ಸಿ ರವರು ಚಂದ್ರಪ್ಪ ಮತ್ತು ಕಾಂತಮ್ಮ ಮೊದಲ ಮಗಳಾಗಿ ನಾರಾಯಣಘಟ್ಟ, ಮುತ್ತಾನಲ್ಲೂರು ಅಂಚೆ, ಆನೇಕಲ್ ತಾಲೂಕು, ಬೆಂಗಳೂರು ಜನ್ಮಪಡೆದರು. ಇವರು ತಮ್ಮ ಬಾಲ್ಯದ ಪ್ರಾಥಮಿಕ ಮತ್ತು ಶಿಕ್ಷಣವನ್ನು ತನ್ನ ಹುಟ್ಟೂರಾದ ನಾರಾಯಣ ಘಟ್ಟದಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು  ನೇತಾಜಿ ಫ್ರೌಢ ಶಾಲೆ ಮುತ್ತಾನಲ್ಲೂರು ಪಡೆದಿದ್ದಾರೆ.

 

ನಂತರ ಪದವಿಪೂರ್ವ ಶಿಕ್ಷಣಕ್ಕಾಗಿ ತಮ್ಮ ತಾಲ್ಲೂಕು ಕೇಂದ್ರವಾದ ಅನೇಕಲ್ ನ ಎ.ಎಸ್. ಬಿ. ಜೂನಿಯರ್ ಕಾಲೇಜು ಮುಂದುವರಿಸಿ, ಬಿ.ಎ ಪದವಿಯನ್ನು  ಮಹಾರಾಣಿ  ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು - ಬೆಂಗಳೂರು ಇಲ್ಲಿ ಪಡೆದು ಶಿಕ್ಷಕಿಯ‍ಾಗುವ ಕನಸನ್ನು ಕಂಡು ಬಿ ಇಡಿ ತರಬೇತಿಗಾಗಿ ಆರ್.ವಿ ಶಿಕ್ಷಕರ ಕಾಲೇಜು - ಬೆಂಗಳೂರು ಇಲ್ಲಿ ತರಬೇತಿಯನ್ನು ಮುಗಿಸಿ ಕನ್ನಡದ ಶಿಕ್ಷಕಿಯಾಗಿ ವೃತ್ತಿಯನ್ನು ಪ್ರಾರಂಭಿಸಿದರು.

 

ಅದರೆ ಓದಿನ ಹಸಿವು ನೀಗಲಿಲ್ಲ ಮತ್ತೆ ಓದು ಮುಂದುವರಿಸುವ  ಹಂಬಲದಿಂದ ಸ್ನಾತಕೋತ್ತರ ಪದವಿಗಾಗಿ ಎಂ.ಎ ಅರ್ಥ ಶಾಸ್ತ್ರ - ಲಾರ್ವೆನ್ ಎಜುಕೇಶನ್ ಸೆಂಟರ್ - ಚಂದಾಪುರ ಇಲ್ಲಿ ಮುಕ್ತ ವಿಶ್ವವಿದ್ಯಾಲಯದಿಂದ ಅಥ೯ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ನಂತರ ಕನ್ನಡದ ವಿಷಯದಲ್ಲಿ  ಸ್ನಾತಕೋತ್ತರ ಪದವಿಯನ್ನು ಪಡೆಯಲು ಸಕಾ೯ರಿ ಕಲಾ ಕಾಲೇಜು ಬೆಂಗಳೂರು ಇಲ್ಲಿ ಓದು ಮುಂದುವರಿಸಿದ್ದಾರೆ.

 

ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ, ತಾನೇಕೆ ತನ್ನ ಬದುಕಿನ ನೋವು ನಲಿವುಗಳನ್ನು ಬರಹವಾಗಿ ಬರೆಯಬಾರದು ಎಂದು ಯೋಚಿಸಿ, ಶಾಲೆಯಲ್ಲಿ ಮಕ್ಕಳಿಗೆ ಕಲಿಸುತ್ತಾ ತಾನು ಕಲಿಯುತ್ತಾ, ಬರೆಯುತ್ತಾ, ಆಗಾಗ ಬರೆದ ಕವಿತೆಗಳನ್ನು ಒಂದುಗೂಡಿಸಿ ಮಾಯ ಜಿಂಕೆ ಎಂಬ ಚೊಚ್ಚಲ ಕವನಸಂಕಲನವನ್ನು ಕುಮಾರಿ ಅಶ್ವಿನಿ ಚಂದ್ರಪ್ಪ ರವರು ಲೋಕಾರ್ಪಣೆ ಮಾಡಿ ಯಶಸ್ಸು ಸಾಧಿಸಿದರು.

 

ಚಿಕ್ಕವಯಸ್ಸಿನಲ್ಲೇ ಹಲವಾರು ಓದುಗರ ಸ್ನೇಹಿತರ ಬಳಗವನ್ನು ಸೃಷ್ಟಿಕೊಂಡು ಕನ್ನಡ ಸಾಹಿತ್ಯಲೋಕದಲ್ಲಿ  ಸೃಜನಶೀಲ ಯುವ ಕವಯತ್ರಿಯಾಗಿ ರೂಪಗೊಳ್ಳುತ್ತಿದ್ದಾರೆ.

ಪುಸ್ತಕ ಲೋಕಾರ್ಪಣೆ ಮಾಡಿ ಹಲವರಿಗೆ ಪುಸ್ತಕವನ್ನು ಕೊಟ್ಟು ಸುಮ್ಮನಾಗಲಿಲ್ಲ ಕುಮಾರಿ ಅಶ್ವಿನಿ ಚಂದ್ರಪ್ಪ ನವರು. ತಾನು ಬರೆದ ಮಾಯಾಜಿಂಕೆಯೆಂಬ  ಕೃತಿಯಿಂದ ಅಯ್ದ ಕವಿತೆಯನ್ನು  ಮಾಯಾಜಿಂಕೆ ಆಫಿಶಿಯಲ್ ಆಲ್ಬಮ್ ಸಾಂಗ್ ಮಾಡಿ ಬಿಡುಗಡೆ ಹಲವಾರು ಹೃದಯಗಳನ್ನು ತಲುಪುವಲ್ಲಿ  ಯಶಸ್ವಿಯಾಗಿದ್ದಾರೆ.

 

ಈ ಮ‍ಾಯಜಿಂಕೆ ಎಂಬ ಕವನಸಂಕಲನದ ಕೃತಿಗೆ ಚೇತನ ಫೌಂಡೇಶನ್ ಧಾರವಾಡ ಇವರಿಂದ 2023ನೇ ಸಾಲಿನ ಕರುನಾಡ ಚೇತನ ಪುಸ್ತಕ ಪ್ರಶಸ್ತಿ, ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮದಲ್ಲಿ ೨೦೨೩ರ ರಾಜ್ಯ ಮಟ್ಟದ ಅತ್ಯುನ್ನತ ಕಾವ್ಯಶ್ರೀ ಪ್ರಶಸ್ತಿ, ಅಕ್ಷರನಾದ ಸಂಸ್ಥೆಯ ವತಿಯಿಂದ ನಡೆದ ಜನ ಗಣ ಮನ  ಕಾರ್ಯಕ್ರಮದಲ್ಲಿ ಅಕ್ಷರ ನಾದ ಸಾಹಿತ್ಯ ಪ್ರಶಸ್ತಿ, ೨೦೨೪ ರಲ್ಲಿ ಜಯ ಕರ್ನಾಟಕ ವತಿಯಿಂದ ನಡೆದ ಕನ್ನಡದಿಂಚರ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ದೊರಕಿದೆ

 

ಕುಮಾರಿ ಅಶ್ವಿನಿ ಚಂದ್ರಪ್ಪರವರು ಬರೀ ಶಿಕ್ಷಕಿಯಾಗಿ ಕವಯಿತ್ರಿಯಾಗಿ ಉಳಿಯದೇ ಹಲವಾರು ಕನ್ನಡದ  ಕಾರ್ಯಕ್ರಮಗಳಲ್ಲಿ ಮತ್ತು ಶಾಲೆಯ ಕಾರ್ಯಕ್ರಮಗಳಲ್ಲಿ  ನಿರೂಪಕಿಯಾಗಿ ಕಾರ್ಯಕ್ರಮಗಳ ನಿರೂಪಣೆಯಲ್ಲೂ ಭೇಷ್ ಎನಿಸಿಕೊಂಡಿದ್ದಾರೆ. ಇವರು ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಬಹುಮಾನ  ಪ್ರಶಸ್ತಿ  ಸ್ವೀಕಾರಿಸಿ ಜನಮನ್ನಣೆಯನ್ನು ಪಡೆಯುತ್ತಿದ್ದಾರೆ

 

ಮುಂದಿನ ದಿನಗಳಲ್ಲಿ ಮತ್ತೊಂದು ಕೃತಿಯನ್ನು  ಲೋಕಾರ್ಪಣೆ ಮಾಡಲು ಸಿದ್ದತೆಯಲ್ಲಿ ತೊಡಗಿರುವ ಕುಮಾರಿ ಅಶ್ವಿನಿ ಚಂದ್ರಪ್ಪ ರವರಿಗೆ ಇವರಿಗೆ ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ  ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನಷ್ಟು ಕೃತಿಗಳನ್ನು ಹೊರತರಲಿ ಅವು ಧಮನಿತರ, ರೈತರ, ಮಹಿಳೆಯರ ಪರವಾದ ಕಾವ್ಯಸಂವೇದನೆಯನು ಚಿಂತಿಸುವ ಕೃತಿಗಳಾಗಲಿ, ಕನ್ನಡ ಸಾಹಿತ್ಯದ ಬರವಣಿಗೆಯಿಂದ ಅವರಿಗೆ ಗೌರವ ಪ್ರಶಸ್ತಿ ಪುರಸ್ಕಾರಗಳು ಲಭಿಸಲಿ ಎಂದು ಪರಸ್ಪರ ಬಹುಮುಖಿ ಆಶಿಸುತ್ತದೆ.